ವಾಹನವನ್ನು ಚಲಾಯಿಸುವಾಗ ವಾಹನ ಪರವಾನಗಿಯ ಪ್ರತಿಯೊಂದನ್ನು ನಿಮ್ಮ ಬಳಿ ಸದಾ ಇಟ್ಟುಕೊಳ್ಳುವುದು ಮತ್ತು ಪೋಲೀಸ್ ಅಧಿಕಾರಿಯು ಕೇಳಿದಾಗ ಆ ದಾಖಲೆಯನ್ನು ಅವರಿಗೆ ತೋರಿಸುವುದು ಕಾನೂನು ಪ್ರಕಾರ ಕಡ್ಡಾಯವಾಗಿರುತ್ತದೆ. ಇಂದಿನ ದಿನಗಳಲ್ಲಿ ನಿಮ್ಮ ವಾಹನ ಚಾಲನಾ ಪರವಾನಗಿಯ ಎಲೆಕ್ಟ್ರಾನಿಕ್ ಪ್ರತಿಯನ್ನು ಡಿಜಿಲಾಕರ್ ನಲ್ಲಿ ಅಥವಾ ಎಂ-ಪರಿವಹನ್ ಆಪ್ ನಲ್ಲಿ ಕೂಡ ಇಟ್ಟುಕೊಳ್ಳಬಹುದಾಗಿದೆ. ನೀವು ಚಾಲ್ತಿಯಲ್ಲಿರುವ ಚಾಲನಾ ಪರವಾನಗಿಯನ್ನು ಹೊಂದಿದ್ದು, ಆದರೆ ಅಧಿಕಾರಿಯೊಬ್ಬರು ಕೇಳಿದಾಗ ಅದು ನಿಮ್ಮ ಬಳಿ ಇರದಿದ್ದಲ್ಲಿ, ನೀವು ರೂ. 500/- ರಿಂದ ರೂ. 1,000/- ದ ವರೆಗಿನ ಜುಲ್ಮಾನೆಯನ್ನು ತೆರಬೇಕಾಗಬಹುದು. ಬದಲಿಯಾಗಿ, ಪರವಾನಗಿಯನ್ನು ತೋರಿಸುವಂತೆ ನಿಮ್ಮನ್ನು ಕೇಳಿದ ಅಧಿಕಾರಿಯ/ಪ್ರಾಧಿಕಾರದ ಮುಂದೆ ನೀವು ಆ ದಾಖಲೆಯನ್ನು ನಿರ್ದಿಷ್ಟಪಡಿಸಿದ ಅವಧಿಯೊಳಗೆ ಹಾಜರುಪಡಿಸಬಹುದು. ಈ ಅವಧಿಯು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರುತ್ತದೆ.
ನೀವು ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರಕ್ಕೆ ಅಥವಾ ಅಧಿಕಾರಿಗೆ ಸಲ್ಲಿಸಿದ್ದಲ್ಲಿ ಅಥವಾ ನಿಮ್ಮ ಪರವಾನಗಿಯನ್ನು ಯಾವುದೇ ಸರ್ಕಾರಿ ಪ್ರಾಧಿಕಾರ ಅಥವಾ ಅಧಿಕಾರಿಯು ವಶಪಡಿಸಿಕೊಂಡಿದ್ದಲ್ಲಿ, ನೀವು ಈ ಸಂಬಂಧದಲ್ಲಿ ಯಾವುದೇ ರೀತಿಯ ರಸೀದಿ ಅಥವಾ ಸ್ವೀಕೃತಿಯನ್ನು ಹಾಜರುಮಾಡತಕ್ಕದ್ದು. ಮತ್ತು ನಿಮ್ಮ ಪರವಾನಗಿಯನ್ನು ನಿರ್ದಿಷ್ಟ ಅವಧಿಯೊಳಗೆ ಹಾಜರುಮಾಡತಕ್ಕದ್ದು. ಈಗಾಗಲೇ ತಿಳಿಸಿದಂತೆ ಈ ನಿರ್ದಿಷ್ಟ ಅವಧಿಯು ಪ್ರತಿ ರಾಜ್ಯಕ್ಕೂ ಬೇರೆಯಾಗಿರುತ್ತದೆ.
ನೀವು ವಾಹನವನ್ನು ಚಲಾವಣೆ ಮಾಡುವಾಗ ಚಾಲನಾ ಪರವಾನಗಿ ಹೊಂದಿಲ್ಲದಿದ್ದಲ್ಲಿ ಅಥವಾ ವಾಹನವನ್ನು ಚಲಾಯಿಸಲು ನೀವು ಅಪ್ರಾಪ್ತ ವಯಸ್ಕರಾಗಿದ್ದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಯು ನಿಮ್ಮ ವಾಹನವನ್ನು ತಡೆಹಿಡಿಯಬಹುದು ಮತ್ತು ವಶಪಡಿಸಿಕೊಳ್ಳಬಹುದು. ಮೇಲಾಗಿ ನಿಮಗೆ ರೂ. 5,000/- ಜುಲ್ಮಾನೆ ಅಥವಾ ಮೂರು ತಿಂಗಳವರೆಗೆ ಕಾರಾವಾಸ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದಾಗಿದೆ.
ಈ ಅಪರಾಧಕ್ಕಾಗಿ ವಿಧಿಸುವ ದಂಡ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿರಬಹುದು. ಎರಡು ರಾಜ್ಯಗಳಲ್ಲಿ ವಿಧಿಸುವ ಬೇರೆ ಬೇರೆ ಮೊತ್ತದ ದಂಡವನ್ನು ಈ ಕೆಳಗೆ ನೀಡಲಾಗಿದೆ.
ರಾಜ್ಯ | ವಾಹನದ ಮಾದರಿ | ಜುಲ್ಮಾನೆಯ ಮೊತ್ತ(ರೂ) |
ದೆಹಲಿ | ಅನ್ವಯವಾಗುವುದಿಲ್ಲ | 5,000 |
ದ್ವಿಚಕ್ರ/ತ್ರಿಚಕ್ರ ವಾಹನಗಳು | 1,000 | |
ಕರ್ನಾಟಕ | ಲಘು ಮೋಟಾರು ವಾಹನ | 2,000 |
ಇತರೆ ವಾಹನಗಳು | 5,000 |