ಬಾಡಿಗೆ/ಭೋಗ್ಯದ ಒಪ್ಪಂದವನ್ನು ನೋಂದಣಿ ಮಾಡುವುದು
ನಿಮ್ಮ ಭೋಗ್ಯದ ಒಪ್ಪಂದವು ಒಂದು ವರ್ಷ ಅಥವಾ ಹೆಚ್ಚಿನ ಅವಧಿಯದಾಗಿದ್ದಲ್ಲಿ ಅದನ್ನು ನೀವು ವಾಸ ಮಾಡುತ್ತಿರುವ ನಗರದ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸತಕ್ಕದ್ದು. ಒಪ್ಪಂದ ಮಾಡಿಕೊಂಡ ನಾಲ್ಕು ತಿಂಗಳ ಅವಧಿಯೊಳಗೆ ಒಪ್ಪಂದವನ್ನು ನೋಂದಣಿ ಮಾಡತಕ್ಕದ್ದು. ಹೀಗೆ ನೋಂದಣಿ ಮಾಡದಿರುವ ಒಪ್ಪಂದವನ್ನು ಬಾಡಿಗೆ ನೀಡಿದ ಕಟ್ಟಡಕ್ಕೆ ಸಂಬಂಧಿಸಿದ ವಿವಾದದಲ್ಲಿ (ವಿವಾದ ಉದ್ಭವಿಸಿದಲ್ಲಿ) ಸಾಕ್ಷಾಧಾರವಾಗಿ ನ್ಯಾಯಾಲಯವು ಪರಿಗಣಿಸುವುದಿಲ್ಲ.
ಒಪ್ಪಂದವನ್ನು ನೋಂದಣಿ ಮಾಡುವುದರಿಂದ ಮಾಲೀಕರು ಪರಸ್ಪರ ಒಪ್ಪಿದ ಮೊತ್ತವನ್ನು ಹೊರತು ಪಡಿಸಿ, ಮತ್ತಾವುದೇ ಹೆಚ್ಚುವರಿ ಮೊತ್ತವನ್ನು ತೆರುವಂತೆ ಅಥವಾ ಯಾವುದೇ ಕಾನೂನು ವಿರುದ್ಧವಾದ ವ್ಯವಹಾರ ನಡೆಸುವಂತೆ ನಿಮ್ಮನ್ನು ಒತ್ತಾಯಿಸುವಂತಿಲ್ಲ.
ನೋಂದಣಿ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ಸಾಮಾನ್ಯವಾಗಿ ಎಲ್ಲಾ ಬಾಡಿಗೆ ಒಪ್ಪಂದಗಳು 11 ತಿಂಗಳ ಅವಧಿಯದಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಒಪ್ಪಂದವನ್ನು ನೋಂದಾಯಿಸುವುದರ ಬದಲಾಗಿ ನೋಟರೀಕರಣ ಮಾಡತಕ್ಕದ್ದು.
ಆದರೆ, ಮುಂಬೈನಂತಹ ಕೆಲವು ನಗರಗಳಲ್ಲಿ ಯಾವುದೇ ಅವಧಿಯ ಅನುಮತಿ ಮತ್ತು ಪರವಾನಗಿ ಒಪ್ಪಂದಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಬಾಡಿಗೆಯ ಯಾವುದೇ ಒಪ್ಪಂದಗಳನ್ನು – ಅನುಮತಿ ಮತ್ತು ಪರವಾನಗಿ ಒಪ್ಪಂದ ಸೇರಿದಂತೆ – ನೋಂದಣಿ ಮಾಡುವುದು ಕಾನೂನು ಪ್ರಕಾರ ಕಡ್ಡಾಯ.
ಒಪ್ಪಂದವನ್ನು ನೋಟರೀಕರಣ ಮಾಡುವುದು
ಯಾವುದೇ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡದಿದ್ದ ಪಕ್ಷದಲ್ಲಿ, ಅದನ್ನು ನೋಟರೀಕರಣ ಮಾಡುವುದು ಕಡ್ಡಾಯ. ನಿಮ್ಮ ಮತ್ತು ಮಾಲೀಕರ ನಡುವಣ ಒಪ್ಪಂದವು ಕರಾರಿನ ಸ್ವರೂಪದಲ್ಲಿದ್ದು, ಎಲ್ಲ ಕರಾರುಗಳನ್ನು ಸಾಮಾನ್ಯವಾಗಿ ನೋಟರಿ ದೃಢೀಕರಿಸುತ್ತಾರೆ. ನೋಟರೀಕರಣ ಮಾಡುವುದರಿಂದ ನಿಮ್ಮ ಒಪ್ಪಂದದ ದಾಖಲೆಗೆ ಮಾನ್ಯತೆ ನೀಡಿದಂತಾಗುತ್ತದೆ ಮತ್ತು ಅದಕ್ಕೆ ಸಹಿ ಮಾಡುವ ಪಕ್ಷಗಾರರ ಗುರ್ತನ್ನು ಬಹಿರಂಗಪಡಿಸಿದಂತಾಗುತ್ತದೆ. ಇದರಿಂದ ನಿಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯುತ್ತದೆ. ಮೇಲಾಗಿ ಬಾಡಿಗೆಗೆ ಸಂಬಂಧಿಸಿದ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದಲ್ಲಿ ನೋಟರೀಕರಣ ಮಾಡಿದ ಒಪ್ಪಂದವನ್ನು ಯಾರೂ ಅಲ್ಲಗಳೆಯಲಾರರು.