ಪೋಲೀಸ್ ಅಧಿಕಾರಿಯು ನಿಮ್ಮ ಎಫ್ಐಆರ್ ದಾಖಲಿಸಲು ನಿರಾಕರಿಸಿದಲ್ಲಿ, ನೀವು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಪೋಲೀಸ್ ಅಧಿಕಾರಿಯು ನಿಮ್ಮ ದೂರನ್ನು ಸ್ವೀಕರಿಸಲು ನಿರಾಕರಿಸಿದಲ್ಲಿ, ನೀವು ದೂರನ್ನು ಲಿಖಿತ ರೂಪದಲ್ಲಿ ಪೋಲೀಸ್ ಸೂಪರಿಂಟೆಂಡೆಂಟ್ (ಎಸ್ಪಿ) ರವರಿಗೆ ಕಳುಹಿಸಬಹುದು. ಎಸ್ ಪಿ ರವರು ನಿಮ್ಮ ಪ್ರಕರಣದಲ್ಲಿ ಹುರುಳಿದೆ ಎಂದು ಪರಿಗಣಿಸಿದಲ್ಲಿ ಅವರು ಪ್ರಕರಣದ ತನಿಖೆಗೆ ಪೋಲೀಸ್ ಅಧಿಕಾರಿಯೊಬ್ಬರನ್ನು ನೇಮಿಸಬಹುದು.
ಪೋಲೀಸ್ ಠಾಣೆಗೆ ಹೋಗುವ ಮುನ್ನ ವಕೀಲರೊಬ್ಬರ ಸಹಾಯ ಪಡೆಯಿರಿ. ವಕೀಲರು ನಿಮ್ಮ ಪರವಾಗಿ ಪ್ರಕರಣ ಮುಂದುವರೆಸುವುದರಿಂದ ಈ ಕ್ರಮ ನಿಮಗೆ ಉಪಯುಕ್ತ. ಮೇಲಾಗಿ ವಕೀಲರೊಡನೆ ಠಾಣೆಗೆ ಹೋದಾಗ ಪೋಲೀಸ್ ಅಧಿಕಾರಿಗಳಿಂದ ಶೋಷಣೆಗೆ ಒಳಗಾಗುವ ಸಾಧ್ಯತೆ ಕಡಿಮೆ.
ಹತ್ತಿರ ಇರುವ ಮತ್ತಾವುದೇ ಪೋಲೀಸ್ ಠಾಣೆಗೆ ಎಫ್ಐಆರ್ ಸಲ್ಲಿಸಲು ತೆರಳಿ. ಯಾವುದೇ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಗಳು ಕಡ್ಡಾಯವಾಗಿ ದೂರುದಾರ ನೀಡುವ ಮಾಹಿತಿಯನ್ನು ದಾಖಲಿಸಿಕೊಂಡು ಯಾವ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಅಪರಾಧ ಜರುಗಿದೆಯೋ ಆ ಠಾಣೆಗೆ ವರ್ಗಾಯಿಸತಕ್ಕದ್ದು. ಈ ವ್ಯವಸ್ಥೆಗೆ “ಶೂನ್ಯ ಎಫ್ಐಆರ್” ಎಂದು ಹೆಸರು.
ನಿಮ್ಮ ಪರವಾಗಿ ಎಫ್ಐಆರ್ ಸಲ್ಲಿಸುವಂತೆ ಬೇರೆ ಯಾರನ್ನಾದರೂ ವಿನಂತಿಸಿಕೊಳ್ಳಿ. ನೀವು ಎದುರಿಸಿರುವ ಹಿಂಸೆ/ಕಿರುಕುಳಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಂತಹ ವ್ಯಕ್ತಿಗೆ ನೀಡಿರಿ.
ಪೋಲೀಸ್ ಠಾಣೆಯಲ್ಲಿ ನಿಮ್ಮ ದೂರನ್ನು ಸ್ವೀಕರಿಸದಿದ್ದ ಪಕ್ಷದಲ್ಲಿ ನೀವು ನೇರವಾಗಿ ಜಿಲ್ಲಾ ನ್ಯಾಯಾಧೀಶರು/ನ್ಯಾಯಿಕ ದಂಡಾಧಿಕಾರಿಗಳ ಮುಂದೆ “ಖಾಸಗಿ ದೂರು” ಸಲ್ಲಿಸಬಹುದಾಗಿದೆ. ಆದರೆ ಹೀಗೆ ಮಾಡುವ ಮುನ್ನ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ನೀವು ಪ್ರಯತ್ನ ಮಾಡಿರತಕ್ಕದ್ದು.
ದೂರು ಸಲ್ಲಿಸಲು ಲಭ್ಯವಿರುವ ಇನ್ನಿತರ ವೇದಿಕೆಗಳಾದ – ರಾಜ್ಯ/ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ. ಈ ಆಯೋಗಗಳು ನೀವು ಪೋಲೀಸ್ ಅಧಿಕಾರಿಗಳಿಂದ ಪರಿಹಾರ ಪಡೆಯಲು ನಿಮಗೆ ಮಾರ್ಗದರ್ಶನ ನೀಡುವುದಲ್ಲದೆ, ನೀವು ಆರೋಪಿಸಿರುವ ಕಿರುಕುಳ/ದೌರ್ಜನ್ಯದ ಕುರಿತಾಗಿಯೂ ಸ್ವತ: ತನಿಖೆ ಮಾಡುತ್ತವೆ.