ಅಂತರ್ಜಾಲದ ಹಲವಾರು ಮಾಧ್ಯಮಗಳಾದ ಸಾಮಾಜಿಕ ಜಾಲತಾಣ, ಚಾಟ್, ಇತ್ಯಾದಿಗಳಲ್ಲಿ ಬಳಕೆದಾರರು ಶೋಷಣೆ ಅಥವಾ ದೌರ್ಜನ್ಯಕ್ಕೊಳಗಾಗುತ್ತಾರೆ. ಅಂತಹ ಸನ್ನಿವೇಶದಲ್ಲಿ ಮೊದಲ ಹೆಜ್ಚೆಯಾಗಿ, ಅಂತಹ ಮಾಧ್ಯಮವು ಶೋಷಣೆಯ ವಿರುದ್ಧ ಹೊಂದಿರುವ ನೀತಿ ನಿಯಮಾವಳಿಗಳನ್ನು ಗಮನಿಸಿ ಮತ್ತು ಆ ಮಾಧ್ಯಮವು ಶೋಷಣೆಯನ್ನು ತಡೆಗಟ್ಟಲು ನೀಡಿರುವ ಸಲಹೆಗಳನ್ನು ಪರಿಗಣಿಸಿರಿ. ಫೇಸ್ ಬುಕ್, ಫೇಸ್ ಬುಕ್ ಮೆಸೆಂಜರ್, ಟ್ವಿಟರ್, ಇನ್ಸ್ಟಾಗ್ರಾಂ, ಸ್ನಾಪ್ ಚಾಟ್, ರೆಡ್ಡಿಟ್, ಯುಟ್ಯೂಬ್, ವಾಟ್ಸಾಪ್, ಮತ್ತು ನಿಮ್ಮ ಮೊಬೈಲಿನಲ್ಲಿ ಬರುವ ಮೇಸೇಜುಗಳಿಂದ ಆಗುವ ಶೋಷಣೆಗೆ ಪ್ರತಿಯಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳನ್ನು (ಬ್ಲಾಕ್ ಮಾಡುವುದು ಮತ್ತು ವರದಿ ಮಾಡುವುದು) ನಾವು ಪಟ್ಟಿ ಮಾಡಿದ್ದೇವೆ.
ಸದರಿ ಮಾಧ್ಯಮದ ಅಡ್ಮಿನಿಸ್ಟ್ರೇಟರ್ ಗಳು ನಿಮ್ಮ ದೂರಿಗೆ ಸಮಂಜಸವಾಗಿ ಸ್ಪಂದಿಸದಿದ್ದಲ್ಲಿ ಅಥವಾ ಅವರ ಪ್ರತಿಕ್ರಿಯೆ ನಿಮಗೆ ತೃಪ್ತಿಯಾಗದಿದ್ದಲ್ಲಿ, ನೀವು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಅಥವಾ ಸೈಬರ್ ಸೆಲ್ ನಲ್ಲಿ ಕ್ರಿಮಿನಲ್ ದೂರನ್ನು ದಾಖಲಿಸಬಹುದು. ನೀವು ಅಂತರ್ಜಾಲ ಮಾಧ್ಯಮದ ಅಡ್ಮಿನಿಸ್ಟ್ರೇಟರ್ ಗಳನ್ನು ಸಂಪರ್ಕಿಸಲೇ ಬೇಕೆಂದು ನಿಯಮವೇನೂ ಇಲ್ಲ. ನೀವು ನೇರವಾಗಿ ಪೋಲೀಸ್ ಠಾಣೆ ಅಥವಾ ಸೈಬರ್ ಸೆಲ್ ನಲ್ಲಿ ದೂರನ್ನು ದಾಖಲಿಸಬಹುದು. ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ನೀವು ಪೋಲೀಸ್ ಠಾಣೆಗೆ ತೆರಳಿದಾಗ, ಪೋಲೀಸ್ ಸಿಬ್ಬಂದಿ ನೀವು ನೀಡುವ ಮಾಹಿತಿಯನ್ನು ಬರೆದುಕೊಳ್ಳತಕ್ಕದ್ದು. ಕಾನೂನಿನ ಹಲವಾರು ಉಪಬಂಧಗಳು ಅಂತರ್ಜಾಲ ಶೋಷಣೆ ಮತ್ತು ದೌರ್ಜನ್ಯವನ್ನು ಅಪರಾಧ ಎಂದು ಘೋಷಿಸಿವೆ. ಇಂತಹ ಅಪರಾಧಗಳಿಗೆ ಗಂಡು ಅಥವಾ ಹೆಣ್ಣು ಯಾರೇ ತುತ್ತಾಗಬಹುದು.